ರಾಕ್ಷಸರು
ಪೌರಾಣಿಕ ವಿವರಗಳ ಪ್ರಕಾರ ಬ್ರಹ್ಮನ ಪಾದದಿಂದ ಹುಟ್ಟಿದ ಭಯಂಕರ ಕ್ಷುದ್ರದೇವತೆಗಳು. ಇವರು ಅಮಾನುಷ ಕ್ರೂರಿಗಳು, ವಿಕಾರ ಸ್ವರೂಪಿಗಳು ದೈತ್ಯಾಕಾರ ಉಳ್ಳವರು. ಇವರಿಗೆ ವಿಶಾಲ ಭುಜಗಳು, ರಕ್ತಸದೃಶ ಅಕ್ಷಿಗಳ, ಕೆಂಪುಗಡ್ಡ,  ಕೆಂಪು ಕೂದಲು, ಬಲಗಿವಿಯಿಂದ ಎಡಗಿವಿಯವರೆಗೆ ಅಗಲವಾದ ಬಾಯಿ. ಚೂಪಾದ ಹಲ್ಲುಗಳು ಮತ್ತು ಅತಿಲಂಬವಾದ ಜಿಹ್ವೆ. ಇವರನ್ನು ಅಸುರರ ಒಂದು ಪಂಗಡವೆಂದೂ ಪರಿಗಣಿಸಲಾಗುತ್ತದೆ. ಇವರು ಮಂತ್ರ ವಿದ್ಯೆಯನ್ನು ಬಲ್ಲವರು. ಮಾಯೆಯಿಂದ ತಮಗಿಷ್ಟಬಂದ ರೂಪ ಪಡೆಯುವ ಶಕ್ತಿಯುಳ್ಳ ಕಾಮರೂಪಿಗಳು. ಕಾಡು ಮತ್ತು ಬೆಟ್ಟಗಳಲ್ಲಿ ಇವರ ವಾಸ. ಪವಿತ್ರ ತೀರ್ಥಕ್ಷೇತ್ರಗಳನ್ನು, ಯಜ್ಞಗಳನ್ನು ಧ್ವಂಸಮಾಡುವುದು ಇವರ ಕಾರ್ಯ. ಇವರನ್ನು ಮೂರು ವರ್ಗಗಳಾಗಿ ವಿಭಾಗಿಸಲಾಗಿದೆ (1) ಅರೆದೈವತ್ವವುಳ್ಳ, ಧರ್ಮಬುದ್ಧಿ ಅಥವಾ ಉಪಕಾರಬುದ್ಧಿಯುಳ್ಳವರು ಮತ್ತು ಯಕ್ಷರಿಗೆ ಸಮಾನರಾದವರು (2) ದೇವತೆಗಳ ಕಡುವಿರೋಧಿಗಳು (3) ರಾತ್ರಿ ಜಾಗೃತರಾಗಿ ಚಲಿಸುವವರು.

ಜರಾ, ವಕ, ಹಿಡಿಂಬ ಮೊದಲಾದವರು ಪ್ರಸಿದ್ಧ ರಾಕ್ಷಸರು. ಜರಾ ತಾಕ್ಷಸಿ. ವಕ ಅತ್ಯಂತ ಶಕ್ತಿಶಾಲಿಯಾದ ರಕ್ಕಸ. ಹಿಡಿಂಬನಂತೂ ಮಹಾಬಲಾಢ್ಯ. ಭಯಂಕರ ಸ್ವರೂಪಿ, ಈತನಿಗೆ ಕೋರೆದಾಡೆಗಳು. ಕೆಂಪುಗಡ್ಡ ಮತ್ತು ಕೂದಲು, ವೃಕ್ಷಕಾಂಡದಂತಹ ದಪ್ಪ ಕತ್ತು ಭುಜಗಳು. ಭರ್ಜಿಯಾಕಾರದ ಕಿವಿಗಳು, ಇವರೆಲ್ಲರೂ ನರಭಕ್ಷಕರಾಗಿದ್ದರು.

ಪ್ರಹೇತಿ ಮತ್ತು ಹೇತಿ ಬ್ರಹ್ಮನಿಂದ ಮೊದಲು ಹುಟ್ಟಿದ ರಾಕ್ಷಸರು. ಮಾಲ್ಯವಾನ, ಸುಮಾಲಿ, ಮತ್ತು ಮಾಲಿ ಎಂಬ ರಾಕ್ಷಸ ಸೋದರರು ಯಕ್ಷ, ಗಂಧರ್ವ, ಕಿನ್ನರ, ಸಿದ್ಧ. ವಿದ್ಯಾಧರ, ಯಮ, ಕುಬೇರ, ವಾಸವ, ನಾಗ, ದೈತ್ಯ, ದಾನವ - ಇವರಾರಿಂದಲೂ ಸೋಲನ್ನು ಅನುಭವಿಸದಂತೆ ಬ್ರಹ್ಮನಿಂದ ವರಪಡೆದು ಮದೋನ್ಮತ್ತರಾಗಿ ಬ್ರಾಹ್ಮಣರು ಮತ್ತು ಗೋವುಗಳನ್ನು ಕೊಂದುತಿನ್ನತೊಡಗಿದರು. ವಿಶ್ವಕರ್ಮ ಇವರಿಗಾಗಿ ದಕ್ಷಿಣ ಸಮುದ್ರದಲ್ಲಿ ತ್ರಿಕೂಡ ಪರ್ವತದ ಮೇಲೆ ಲಂಕಾ ನಗರವನ್ನು ನಿರ್ಮಿಸಿಕೊಟ್ಟ. ಅಲ್ಲಿ ಈ ಮಾಲ್ಯವಾನ, ಸುಮಾಲಿ ಮತ್ತು ಮಾಲಿ ಇವರು ಅನುಕ್ರಮವಾಗಿ ಸುಂದರಿ, ಕೇತುಮತಿ ಮತ್ತು ವಸುಧಾ ಎಂಬವರನ್ನು ವಿವಾಹವಾಗಿದ್ದರು.

ಮಾಲ್ಯವಾನ ಮತ್ತು ಸುಂದರಿ ದಂಪತಿಗಳಿಗೆ ವಜ್ರಮುಷ್ಟಿ, ವಿರೂಪಾಕ, ದುಮ್ಮುಖ, ಸುಪ್ತಜ್ಞ, ಉಜ್ಞಕೋಪ, ಉನ್ಮತ್ತ ಎಂಬ ಆರು ಮಂದಿ ಗಂಡು ಮಕ್ಕಳೂ ಅನಲಾ ಎಂಬ ಮಗಳೂ ಹುಟ್ಟಿದರು. ಸುಮಾಲಿ ಮತ್ತು ಕೇತುಮತಿ ದಂಪತಿಗಳಿಗೆ ಹತ್ತುಮಂದಿ ಗಂಡುಮಕ್ಕಳೂ ನಾಲ್ಕು ಮಂದಿ ಹೆಣ್ಣಮಕ್ಕಳೂ ಹುಟ್ಟಿದರು. ಮಾಲಿ ಮತ್ತು ವಸುಧಾ ದಂಪತಿಗಳಿಗೆ ನಾಲ್ಕು ಮಂದಿ ಗಂಡುಮಕ್ಕಳು ಹುಟ್ಟಿದರು. ಹೀಗೆ ಇವರುಗಳ ಮಕ್ಕಳು ಮೊಮ್ಮಕ್ಕಳು ಹುಟ್ಟಿರಾಕ್ಷಸರ ಸಂಖ್ಯೆ ಅಗಾಧವಾಗಿ ಬೆಳೆದುಹೋಯಿತು.

ಕೈಕಸಿ ಮತ್ತು ವಿಶ್ರವಸು ದಂಪತಿಗಳಿಗೆ ರಾವಣ, ವಿಭೀಷಣ, ಕುಂಭಕರ್ಣ, ಎಂಬ ಮೂವರು ಗಂಡುಮಕ್ಕಳೂ ಶೂರ್ಪಣಖಿ ಎಂಬ ಮಗಳೂ ಇದ್ದರು. ರಾವಣ (ನೋಡಿ- ರಾವಣ) ರಾಕ್ಷಸರ ಪ್ರಖ್ಯಾತ ರಾಜನಾಗಿ ಲಂಕೆಯಲ್ಲಿ ರಾಜ್ಯಭಾರ ಮಾಡಿದ.	

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ
													 
 *